1670-1748. ಔರಂಗಜೇಬನ ಪ್ರಮುಖ ದಳಪತಿಯಾಗಿದ್ದ ತುರಾನವಂಶದ ಫಯಾಸುದ್ದೀನ್‌ನ ಮಗ, ದಖನ್ನಿನ ನಿಜಾಮವಂಶದ ಮೂಲಪುರುಷ. ತಂದೆಯಂತೆ ಇವನೂ ಯುದ್ಧಕಲೆಯಲ್ಲಿ ಪರಿಣಿತನಾಗಿ ಔರಂಗಜೇಬನಿಂದ ಗೌರವಿಸಲ್ಪಟ್ಟ. ಹೀಗೆ ಪ್ರಭಾವವನ್ನು ಹೆಚ್ಚಿಸಿಕೊಂಡು 1713ರಲ್ಲಿ ಔರಂಗಜೇಬನ ವಂಶಿಕನಾದ ಫರುಖ್ ಶಿಯಾರ್‌ನಿಗೆ ಸಹಾಯಮಾಡಿ ಅವನ ವಿಜಯಕ್ಕೆ ಮುಖ್ಯ ಕಾರಣನೆನಸಿದ. ಇದರಿಂದ ಇವನಿಗೆ ಔರಂಗಾಬಾದ್ ಸೇರಿದಂತೆ ದಕ್ಷಿಣಾಪಥದ ಆರು ಪ್ರಾಂತ್ಯಗಳೂ ಬಳುವಳಿಯಾಗಿ ಬಂದುವು. ನಿಜಾಮ್-ಉಲ್-ಮುಲ್ಕ್‌ ಎಂಬ ಬಿರುದೂ ದೊರಕಿತು. ಆದರೆ ಮಾರನೆಯ ವರ್ಷವೇ ಈ ಸುಬಾಗಳು ಇವನ ಕೈಬಿಟ್ಟುಹೋದುವು. ಕೋಪಗೊಂಡ ನಿಜಾಮ ಮುರಾದಾಬಾದನ್ನು ಸೇರಿದ. ಆದರೆ ದಿಲ್ಲಿಯ ಸಾಮ್ರಾಟನ ಅಪ್ಪಣೆಯ ಮೇರೆಗೆ ಅಲ್ಲಿಂದಲೂ ಇವನನ್ನು ಕರೆತರಲಾಯಿತು. ಕೊನೆಗೆ 1719ರಲ್ಲಿ ಈತ ಮಾಳ್ವದೇಶದ ಅಧಿಕಾರಿಯಾಗಿ ನೇಮಕಗೊಂಡ. ನಿಜಾಮ ದಖನ್ನಿನ ಗಣ್ಯಾಧಿಕಾರಿಯಾಗಬೇಕೆಂಬ ಆಶಯದಿಂದ, ಸಾಮ್ರಾಟನ ಅಪ್ಪಣೆಯನ್ನೂ ಲೆಕ್ಕಿಸದೆ ನರ್ಮದಾನದಿಯನ್ನು ದಾಟಿ ಅಸೀರ್ಘರ್ ಮತ್ತು ಬುರ್ಹಾನ್ಪುರಗಳನ್ನು ಆಕ್ರಮಿಸಿಕೊಂಡ. ಹೀಗೆಯೇ ಬಿಟ್ಟರೆ ತೊಂದರೆಯುಂಟಾಗ ಬಹುದೆಂದು ಸಾಮ್ರಾಟ ಇವನನ್ನು 1722ರಲ್ಲಿ ತನ್ನ ವಜೀರನನ್ನಾಗಿ ನೇಮಿಸಿದ. ಪರಿಸ್ಥಿತಿಗಳು ಸರಿಬಾರದ್ದರಿಂದ ನಿಜಾಮ ಗುಜರಾತಿನ ಸರ್ವಾಧಿಕಾರಿಯಾದ (1724). ಹೈದರಾಬಾದಿಗೆ ಬಂದು ಮುಬಾರಿಸ್‌ಖಾನನನ್ನು ಸೋಲಿಸಿ ದಖನ್ ಪ್ರದೇಶವನ್ನು ತನ್ನ ವಶಮಾಡಿಕೊಂಡ. ಇದೇ ನಿಜಾಮರ ವಂಶಕ್ಕೆ ತಳಹದಿಯಾಯಿತು. ಮರಾಠರು ಸುಲ್ತಾನನ ಮೇಲೆ ಯುದ್ಧಮಾಡಲು ಹವಣಿಸಿದಾಗ, ಸುಲ್ತಾನನಿಗೆ ನಿಜಾಮನ ಆವಶ್ಯಕತೆ ತಲೆದೋರಿತು. ಕೂಡಲೇ ಅವನನ್ನು ದೆಹಲಿಗೆ ಬರಮಾಡಿ ಬಿರುದು ಬಾವಲಿಗಳನ್ನು ಕೊಟ್ಟು, ಮರಾಠರ ಮೇಲೆ ಯುದ್ಧಮಾಡಲು ಪ್ರೋತ್ಸಾಹಿಸಿದ. ಭೂಪಾಲಿನಲ್ಲಿ ನಡೆದ ಯುದ್ಧದಲ್ಲಿ ನಿಜಾಮ ಸೋತ (1730). ಗೋಲ್ಕೊಂಡದಿಂದ ಆರ್ಕಾಟಿಗೆ ಹೋಗಿ ಅನ್ವರುದ್ದೀನ್‌ಖಾನನನ್ನು ಅಲ್ಲಿಯ ಸರ್ವಾಧಿಕಾರಿಯನ್ನಾಗಿ ನಿಯಮಿಸಿದ (1743). ಮುರಾರಿರಾಯನಿಂದ ತಿರುಚಿನಾಪಳ್ಳಿಯನ್ನು ವಶಪಡಿಸಿಕೊಂಡ. ಇವೆಲ್ಲವನ್ನೂ ಗಮನಿಸಿದ ಬ್ರಿಟಿಷ್ ಮತ್ತು ಫ್ರೆಂಚ್ ವ್ಯಾಪಾರಿಗಳು ಇವನೇ ದಕ್ಷಿಣ ಭಾರತದ ಅತಿ ಪ್ರಬಲರಾಜನೆಂದು ಪರಿಗಣಿಸಿ ಕಾಣಿಕೆಗಳನ್ನು ಕಳುಹಿಸಿದರು. ಕಡಪ, ಕರ್ನೂಲು, ರಾಜಮಹೇಂದ್ರಿಗಳೂ ಇವನ ಆಳ್ವಿಕೆಗೆ ಸೇರಿದವು. ಇದರಿಂದ ಇವನ ಪ್ರಭಾವ ಹೆಚ್ಚಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ